ಡೇಮೂಲ್ಯಾನ್, ಕ್ಯಾಮೀಯ್
1760-1794. ಫ್ರೆಂಚ್ ಕ್ರಾಂತಿಯ ಕಾಲದ ಅತ್ಯಂತ ಪ್ರಭಾವಶಾಲಿಯಾದ ಒಬ್ಬ ಮಹಾ ಪತ್ರಕರ್ತ. ಪುಸ್ತಿಕಾ ಲೇಖಕ. ಲೂಸೀ ಸ್ಯಾನ್‍ಪ್ಲೀಸ್ ಕ್ಯಾಮೀಯ ಬನ್ವಾ ಎಂಬುದು ಈತನ ಪೂರ್ಣ ಹೆಸರು. ಉತ್ತರ ಫ್ರಾನ್ಸಿನ ಪೀಕಾರ್ಡಿ ಪ್ರದೇಶದ ಗೀಸ್ ಎಂಬಲ್ಲಿ 1760ರ ಮಾರ್ಚ್ 2 ರಂದು ಜನಿಸಿದ. 

	ಪ್ಯಾರಿಸಿನ ಲೂಯಿ ಲ-ಗ್ರ್ಯಾಂಡ್ ಕಾಲೇಜಿನಲ್ಲಿ ಈತ ಶಿಕ್ಷಣ ಪಡೆದ. ಕ್ರಾಂತಿಕಾರಿ ರೋಬ್ಸ್‍ಪಿಯರ್ ಈತನ ಸಮಕಾಲೀನ ವಿದ್ಯಾರ್ಥಿಯಾಗಿದ್ದ. ನ್ಯಾಯವಾದಿಯಾಗಬೇಕೆಂಬುದು ಈತನ ಆಕಾಂಕ್ಷೆಯಾಗಿತ್ತು. 1785ರ ಮಾರ್ಚ್ ತಿಂಗಳಲ್ಲಿ ಈತ ನ್ಯಾಯವಾದಿಯಾದ. ಆದರೆ ಉಗ್ಗಿನಿಂದಾಗಿ ಇವನು ಆ ವೃತ್ತಿಯಲ್ಲಿ ಯಶಸ್ಸು ಗಳಿಸಲಾರದಾದ. ಆಗಿನಿಂದಲೂ ಇವನು ಗಣರಾಜ್ಯ ಕುರಿತ ಭಾವನೆಗಳನ್ನು ಬಹಿರಂಗವಾಗಿ ಅಭಿವ್ಯಕ್ತಿಸುತ್ತಿದ್ದ. ಈತ ಹೊಸ ಸ್ವಾತಂತ್ರ್ಯ ಸೂತ್ರಗಳನ್ನು ಅತ್ಯಂತ ಉತ್ಸಾಹದಿಂದ ಅಂಗೀಕರಿಸಿದ್ದ. ಆಗಿಂದಾಗ್ಗೆ ಉದ್ರೇಕಕಾರಿ ಪುಸ್ತಿಕೆಗಳನ್ನೂ ಹೊರತರುತ್ತಿದ್ದ. ತನ್ನ ಸಾರ್ವಜನಿಕ ರಾಜಕೀಯ ಮನವಿಗಳಿಂದಾಗಿ ಈತನೊಬ್ಬ ದಿಟ್ಟ ಸುಧಾರಕನೆಂದು ಪ್ರಸಿದ್ಧನಾದ. 

	ಇಂದಿನ ಸಮಾಜವಾದದ ಆದರ್ಶಗಳನ್ನೆಲ್ಲ ಈತ ತನ್ನ ಪುಸ್ತಿಕೆಗಳಲ್ಲಿ ಸಿದ್ಧಾಂತಗಳ ರೂಪದಲ್ಲಿ ಪ್ರತಿಪಾದಿಸಿದ. ಇವನು ವಕೀಲಿಯನ್ನು ಬಿಟ್ಟರೂ ಸಂವೈಧಾನಿಕ ಹಾಗೂ ಸಂಸದೀಯ ವ್ಯವಹಾರಗಳಲ್ಲಿ ಈತನ ಆಸಕ್ತಿ ಮುಂದುವರಿಯಿತು. 1789ರಲ್ಲಿ ಎಸ್ಟೇಟ್ಸ್ ಜನರಲ್ (ವಿಧಾನ ಸಭೆ) ಆರಂಭವಾದಾಗ ಇವನ ಉತ್ಸಾಹ ಕುದುರಿತು. ವರ್ಸೇಲ್ಸ್‍ನಲ್ಲಿ ಅದರ ಅಧಿವೇಶನವನ್ನು ವೀಕ್ಷಿಸಲು ಡೇಮೂಲ್ಯಾನ್ ಅಲ್ಲಿಗೆ ಹೋದ. 

	ಫ್ರೆಂಚ್ ಕ್ರಾಂತಿಯ ಆರಂಭಕಾಲದಲ್ಲಿ ಈತ ಎಲ್ಲರ ಗಮನವನ್ನೂ ಸೆಳೆದ, ಆ ಸಮಯದಲ್ಲಿ ಇವನು ಅನೇಕ ಭಾಷಣಗಳನ್ನು ಮಾಡಿದ. ಸತತವಾಗಿ ಪುಸ್ತಿಕೆಗಳನ್ನು ಪ್ರಕಟಿಸಿದ. ಜನರನ್ನು ಪ್ರಚೋದಿಸಿದ. ಪ್ರವರ್ತಕ-ಪ್ರಜೆಯೆಂದು ಪ್ರಸಿದ್ಧನಾದ. 

	ಫ್ರಾನ್ಸಿನ ಹಣಕಾಸಿನ ಮಹಾನಿರ್ದೇಶಕನಾಗಿದ್ದ ಷಾಕ್ ನೆಕರನನ್ನು 1789ರ ಜುಲೈ 12ರಂದು 16ನೆಯ ಲೂಯಿ ವಜ ಮಾಡಿದ ಸುದ್ಧಿ ಪ್ಯಾರಿಸಿನಲ್ಲಿ ಹಬ್ಬಿದಾಗ ಡೇಮೂಲ್ಯಾನ್ ಪ್ಯಾಲೇ ರಾಯಲ್ ಉದ್ಯಾನದಲ್ಲಿ ಸೇರಿದ್ದ ಜನಸಂದಣಿಯ ಮುಂದೆ ಉದ್ರೇಕಕಾರಿ ಭಾಷಣ ಮಾಡಿದ. ಕತ್ತಿ ಝಳಪಿಸಿ, ಪಿಸ್ತೂಲು ಹಾರಿಸಿದನೆಂದೂ ಜನರೂ ತನ್ನಂತೆ ಅಸ್ತ್ರಧಾರಿಗಳಾಗಬೇಕೆಂದು ಅವರನ್ನು ಹುರಿದುಂಬಿಸಿದನೆಂದೂ ಹೇಳಲಾಗಿದೆ. ಭಾಷಣ ಮಾಡುತ್ತಿದ್ದಾಗ ಆವೇಶದ ಕಾವೇರಿ ಮರವೊಂದರ ಸಣ್ಣ ರೆಂಬೆಯೊಂದನ್ನು ಮುರಿದ. ಅಲ್ಲಿ ಸೇರಿದ್ದವರಲ್ಲಿ ಬಹುಮಂದಿ ಹೀಗೆಯೇ ಮಾಡಿದರು. ತನ್ನ ಟೊಪ್ಪಿಗೆಗೆ ಸಿಕ್ಕಿಸಿಕೊಂಡ ರೆಂಬೆಯ ಹಸುರೆಲೆಗಳು ಆಸೆಯ ಪ್ರತೀಕವೆಂಬುದು ಅವನ ಭಾವನೆಯಾಗಿತ್ತು. ಹಸಿರು ಪಟ್ಟಿಯೇ ರಾಷ್ಟ್ರಲಾಂಛನವಾಗಿ ಸ್ವೀಕೃತವಾಯಿತು. ತ್ರಿವರ್ಣ ಲಾಂಛನ ಬಂತು. ಅನಂತರ ಅವನು ಉದ್ಯಾನದಿಂದ ಹೊರಬಿದ್ದ. ಇವನನ್ನು ಸಾವಿರಾರು ಜನರು ಹಿಂಬಾಲಿಸಿದರು. ಅಸ್ತ್ರಗಳನ್ನು ಲೂಟಿಹೊಡೆಯುವಂತೆ ಇವನು ಜನರನ್ನು ಪ್ರೇರೇಪಿಸಿದ. ಪ್ಯಾರಿಸಿನಲ್ಲಿ ರಾಜಕೀಯ ಕೈದಿಗಳನ್ನಿಟ್ಟಿದ್ದ ಬ್ಯಾಸ್ಟೀಲನ್ನು (ಕೋಟೆ) ಜನರು 1789ರ ಜುಲೈ 14ರಂದು ಹಿಡಿದುಕೊಳ್ಳುವುದಕ್ಕೆ ಇದರಿಂದ ಹಾದಿ ಸುಗಮವಾಯಿತು. 

	ಅದಮ್ಯ ರಾಜಕಾರಣಿಯಾಗಿದ್ದ ಡೇಮೂಲ್ಯಾನ್ 1792ರ ಆಗಸ್ಟ್ 10ರ ಬಂಡಾಯದ ಮುಖ್ಯ ನಾಯಕರಲ್ಲಿ ಒಬ್ಬನಾಗಿದ್ದ. ಟ್ವೀಲರಿಸ್ ಅರಮನೆಯನ್ನು ಮುತ್ತಿ ನಾಶಪಡಿಸಿದವರಲ್ಲಿ ಇವನೂ ಸೇರಿದ್ದ. 16ನೆಯ ಲೂಯಿಗೆ ಮರಣದಂಡನೆ ವಿಧಿಸಬೇಕೆಂದು ಇವನು ಮತ ನೀಡಿದ. ಫ್ರೆಂಚ್ ಕ್ರಾಂತಿಯ ಆರಂಭದ ವರ್ಷಗಳಲ್ಲಿ ಪ್ರಮುಖ ಪಾತ್ರವಹಿಸಿದ ಷಾóಕ್ ಷಾóóಷ್ರ್ó ಡಾಂಟಾನನ ನ್ಯಾಯಾಂಗ ಸಚಿವಾಲಯದಲ್ಲಿ ಇವನಿಗೆ ಮಹಾಕಾರ್ಯದರ್ಶಿಯ ಅಧಿಕಾರ ದೊರಕಿತು (1792ರ ಆಗಸ್ಟ್ 10). 1792ರ ಸೆಪ್ಟೆಂಬರ್‍ನಲ್ಲಿ ವಿಧ್ಯುಕ್ತಸಭೆಗೆ (ಕನ್ವೆನ್ಷನ್) ಪ್ಯಾರಿಸಿನ ಪ್ರತಿನಿಧಿಯಾಗಿ ಇವನ ಆಯ್ಕೆಯಾಯಿತು. 

	ಡೇಮೂಲ್ಯಾನನ ಬರೆವಣಿಗೆಗಳು ಚತುರೋಕ್ತಿಗಳಿಂದಲೂ ಕಟು ವ್ಯಂಗ್ಯದಿಂದಲೂ ಕೂಡಿದ್ದುವು. ಇವನೊಬ್ಬ ಮಹಾವಾಗ್ಮಿ. ತನ್ನ ಬರಹಗಳಿಂದಲೂ ಮಾತಿನಿಂದಲೂ ರಾಜಕೀಯ ವಿರೋಧಿಗಳೊಂದಿಗೆ ಸೆಣಸಾಡಿದ. 

	ಡಾಂಟಾನನೊಂದಿಗೆ ಗೆಳೆತನವೇ ಡೇಮೂಲ್ಯಾನನ ಪತನಕ್ಕೆ ಕಾರಣವಾಯಿತು. ಸಾರ್ವಜನಿಕ ಸುರಕ್ಷತಾ ಸಮಿತಿ ಇವನ ದಸ್ತಗಿರಿಗೆ ಆಜ್ಞೆ ಹೊರಡಿಸಿತು. ಮಾರ್ಚ್ 30ರಂದು ಇವನನ್ನು ಸೆರೆಮನೆಗೆ ಒಯ್ಯಲಾಯಿತು. ವಿಚಾರಣೆಯ ನಾಟಕ ನಡೆಸಿ ಡಾಂಟನನ ಅನುಯಾಯಿಗಳೊಂದಿಗೆ ಇವನನ್ನೂ 1794ರ ಏಪ್ರಿಲ್ 5ರಂದು ಮರಣದಂಡನೆಗೆ ಗುರಿಪಡಿಸಲಾಯಿತು. 
(ಎಸ್.ಐ.ಕೆ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ